Sunday, August 9, 2009

ಕಾಲ

ಆತ ಐದಂಕಿ ಸಂಬಳ ಎಣಿಸುವ ಸಾಪ್ಟವೇರ್ ಇಂಜಿನಿಯರ್. ಆತನ ತಂದೆಯೋ ಮಗನ ವರ್ಷದ ಸಂಬಳವನ್ನು ಕೂಡ ತನ್ನ ಜೀವನದ ವರಮಾನದಲ್ಲಿ ಎಣಿಸಿಲ್ಲ, ಈಗ ತಂದೆಗೆ ಪ್ರಾಯವಾಗಿದೆ, ರಿಟೈರ್ ಆಗಿ ಮನೆಯಲ್ಲಿದಾರೆ. ತಿಂಗಳ ಔಷಧಿ ಖರ್ಚು ಮಗ ಭರಿಸುವಂತಾಗಿದೆ. ಮಗ ತಂದೆಗಾಗಿ ಐನೂರು ರುಪಾಯೀ ಖರ್ಚು ಮಾಡಲು ಐದು ಸಲ ಆಲೋಚಿಸುವ ಮಟ್ಟಕ್ಕಿಳಿದಿದ್ದಾನೆ.
***
ಕಾಲ ಉರುಳುತಿದೆ… ಆರು ವರುಷದ ಮಗನಿದ್ದಾನೆ. ಈತ ಮಗನ ಭವಿಷ್ಯತ್ತಿಗೆ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದಾನೆ, ಈತನ ತಂದೆಯೂ ಇದೇ ಯೋಜನೆಯನ್ನು ಮೂವತ್ತು ವರ್ಷಗಳ ಹಿಂದೆ, ಹಾಕಿಕೊಂಡಿದ್ದರು. ವ್ಯತ್ಯಾಸ ಮಾತ್ರ ಖರ್ಚಿನ ಅಂಕಿ ಅಂಶಗಳಲ್ಲಷ್ಟೆ, ಉಳಿದೆಲ್ಲವು ಒಂದೇ.
***
ಅಂದು ಅತನಿಗೆ ಜ್ವರ. ನಾಲ್ಕು ಸಲ ಡಾಕ್ಟರ್ ಬಂದು ಹೋಗಿದ್ದಾರೆ. ದಿನಕ್ಕೆ ಸಾವಿರಾರು ರೂಪಯಿಗಳನ್ನು ಖರ್ಚು ಮಾಡಿದ್ದಾನೆ. ರಜೆ ಹಾಕಿ ಮನೆಯಲ್ಲಿ ಮಲಗಿದ್ದಾನೆ. ಪಕ್ಕದಲ್ಲಿ ಹೆಂಡತಿ ಸೇವೆಗೆ ಸದಾ ಆಣಿಯಾಗಿದ್ದಾಳೆ. ಹೆಂಡತಿ ಪಕ್ಕ ನಗುತ್ತ ಕೂತಿರೊ ಮಗನ ಮುಖವನ್ನು ಸೂಕ್ಮ ವಾಗಿ ನೋಡುತ್ತಿದ್ದಾನೆ..ಅದೇಕೊ ಮಗ ತನ್ನನ್ನು ನೋಡಿ ಅಣಕವಾಡುತಿದ್ದಾನೆ ಅನಿಸುತಿದೆ... ಮನಸ್ಸು ಭಾರವಾಗುತ್ತಿದೆ... ಎದುರಿಗಿರೊ ರೂಮಿನಲ್ಲಿ ತಂದೆ ಮಲಗಿದ್ದಾರೆ. ಕಿಟಕಿಯಾಚೆಗಿನ ವಿಶಾಲ ಆಕಾಶವನ್ನು ದಿಟ್ಟಿಸಿ ನೋಡುತ್ತಿದ್ದಾರೆ…
***
ಗಡಿಯಾರ ಓಡುತಿದೆ..ಆದರೆ ಅದೇ ಶಬ್ದ..ಟಿಕ್ ಟಿಕ್ ಟಿಕ್...
***

No comments:

Post a Comment